Wednesday, 25 December 2013

ಅಭಿಮತ ಮಂಗಳೂರು ಸಂಘಟಿಸಿದ 'ಜನನುಡಿ' ಸಮಾವೇಶದಲ್ಲಿ ಡಾ! ಅನುಮಾ ಎಹ್ ಎಸ್ ಮಾಡಿದ ಆಶಯ ಭಾಷಣ.

ಡಿಸೆಂಬರ್ 14 ರಂದು ನಡೆದ ಜನನುಡಿ ಸಮಾವೇಶದಲ್ಲಿ ಡಾ. ಎಚ್. ಎಸ್. ಅನುಪಮ ಆಡಿದ ಈ ಆಶಯ ಮಾತುಗಳು ಈ ಕಾಲದ ಸದಾಶಯವ ಮಾತುಗಳೂ ಕೂಡಾ...


ಕೃಪೆ :- ಹರ್ಷಕುಮಾರ್ ಕುಗ್ವೆ

ವಿ ಆಲ್ಸೋ ಮೇಕ್ ಹಿಸ್ಟರಿ..


(‘ಜನ ನುಡಿ’ ಸಮಾವೇಶದ ಆಶಯ ಮಾತುಗಳು - ೧೪-೧೨-೧೩, ಮಂಗಳೂರು.) 







ನಾವೆಲ್ಲ ಒಂದು ಚಾರಿತ್ರಿಕ ಅನಿವಾರ್ಯತೆಯ ಕಾರಣದಿಂದ ಇಲ್ಲಿ ಸೇರಿದ್ದೇವೆ. ಈ ಎಲ್ಲ ಸಹಸ್ರಮಾನಗಳಲ್ಲಿ ಪಲ್ಲಕ್ಕಿ ಮೇಲೆ ಕೂತವರು, ಮೆರವಣಿಗೆಯಲ್ಲಿ ಸಾಗಿದವರು, ಸಿಂಹಾಸನವನೇರಿದವರು ಇತಿಹಾಸವಾಗಿದ್ದಾರೆ, ಇತಿಹಾಸ ಬರೆಸಿದ್ದಾರೆ. ಆದರೆ ಈಗ ಪಲ್ಲಕ್ಕಿ ಹೊತ್ತವರು, ಮೆರವಣಿಗೆಯ ಪಂಜು ಉರಿಯಲು ರಕ್ತವನ್ನು ಎಣ್ಣೆಯಾಗಿಸಿ ಬಸಿದವರು, ಸಿಂಹಾಸನದ ಕಾಲುಗಳಾದವರು ಮಾತನಾಡತೊಡಗಿದ್ದಾರೆ. ಈಗ ನಾವು ಇತಿಹಾಸ ನಿರ್ಮಿಸುತ್ತಿದ್ದೇವೆ, ನಾವೂ ಇತಿಹಾಸ ನಿರ್ಮಿಸುತ್ತೇವೆ.

ಕರ್ನಾಟಕದ ಸಾಹಿತ್ಯಿಕ-ಸಾಂಸ್ಕೃತಿಕ ಪರಿಸರದಲ್ಲಿ ಇವತ್ತು ಆಗುತ್ತಿರುವ ಮುಖ್ಯ ಪಲ್ಲಟಗಳು ನಮ್ಮನ್ನಿಲ್ಲಿ ಒಟ್ಟು ಸೇರುವ ಹಾಗೆ ಮಾಡಿವೆ. ಜನಸಮುದಾಯಗಳ ನಡುವೆ ಅಸಹನೆ ಹೆಚ್ಚಾಗುತ್ತಿರುವ; ಸಮುದಾಯಗಳು ತಮ್ಮ ಐಡೆಂಟಿಟಿ ಪ್ರಜ್ಞೆಯನ್ನು ಅಸ್ತಿತ್ವದ ಪ್ರಶ್ನೆಯಾಗಿಸಿಕೊಳ್ಳುತ್ತಿರುವ ಕಾಲದಲ್ಲಿ ಸೌಹಾರ್ದತೆಯ ಸೂಕ್ಷ್ಮ ನೇಯ್ಗೆ ಗಾಸಿಗೊಳ್ಳುತ್ತಿದೆ. 

ಬಂಡವಾಳ ಎಂಬ ‘ಮಾಯೆ’ ಬದುಕಿನ ರೀತಿ ನೀತಿಗಳನ್ನು; ಧ್ಯೇಯೋದ್ದೇಶಗಳನ್ನು; ಸಂಬಂಧ-ನಡೆಗಳನ್ನು ಇನ್ನಿಲ್ಲದಂತೆ ಪ್ರಭಾವಿಸುತ್ತಿದೆ. ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿದೆ. ಬಂಡವಾಳಕ್ಕೊಂದು ಹಿತಾಸಕ್ತಿಯಿರುತ್ತದೆ. ಅದು ಎಂದಿಗೂ ತನ್ನ ಹಿತಾಸಕ್ತಿಗಾಗಿಯೇ ಕೆಲಸ ಮಾಡುತ್ತದೆ. ಮೂಲಗಂಟನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಯಾವ ರಾಜಿಗೂ ಸಿದ್ಧವಾಗುತ್ತದೆ. ಆಮಿಷಗಳನ್ನೊಡ್ಡುತ್ತ ಸಮುದಾಯದ ಸಣ್ಣಪುಟ್ಟ ವಿವರಗಳಿಗೂ ಕೈ ಹಾಕಿ ಭ್ರಷ್ಟಗೊಳಿಸಲೆತ್ನಿಸುತ್ತದೆ. ವ್ಯಾಪಾರವನ್ನು ವ್ಯಾಪಾರ ಎಂದುಕೊಂಡೇ ಮಾಡುವುದು ಒಂದು ತೆರನಾದರೆ; ಕಲೆ-ಸಂಸ್ಕೃತಿ-ಧರ್ಮದ ಪೋಷಾಕು ಹಾಕಿ ನಮ್ಮದು ವ್ಯಾಪಾರವಲ್ಲ, ಸೇವೆ ಎನ್ನುವುದು ಇನ್ನೊಂದು ರೂಪ. ತೆರೆಮರೆಯ ವ್ಯಾಪಾರ ಅಥವಾ ಸೇವೆಯ ಹೆಸರಿನ ಹಿಂದಿರುವ ವ್ಯಾಪಾರ ಹೆಚ್ಚು ಅಪಾಯಕರ ಏಕೆಂದರೆ ಅಲ್ಲಿ ಹಿತಾಸಕ್ತಿಗಳು ಅಗೋಚರವಾಗಿ ಉಳಿಯುತ್ತವೆ. ತನ್ನ ಇಡುಗಂಟು ಉಳಿಸಿಕೊಳ್ಳಲು ವ್ಯಾಪಾರಿಯು ಸಮುದಾಯದ ಭಾಷೆಯನ್ನೇ ಆಡುತ್ತಾನೆ, ಜಾನಪದದ ಲಯ, ನುಡಿಗಟ್ಟುಗಳನ್ನೇ ಬಳಸಿಕೊಳ್ಳುತ್ತಾನೆ. ಅಗ್ರಸ್ಥಾನ ನೀಡಿ ಹುಸಿಹೆಮ್ಮೆ ಹುಟ್ಟಿಸುತ್ತಾನೆ. ಆಳದಲ್ಲಿ ದುರ್ಬಲವಾದದ್ದರ ಪರ ಮಾತನಾಡುವ ದುರ್ಬಲರ ಶೋಷಕ ಆತನೇ ಆಗಿರುತ್ತಾನೆ.

ಹೀಗೆ ಬಂಡವಾಳ ನಾನಾ ಪೋಷಾಕುಗಳಲ್ಲಿ ಬರುತ್ತಿರುವಾಗ ಅಷ್ಟೇ ಅಪಾಯಕಾರಿಯಾಗಿ ಮೂಲಭೂತವಾದವೂ ನಮ್ಮ ನಡುವೆ ಬೆಳೆಯುತ್ತಿದೆ. ಅತಿ ಧಾರ್ಮಿಕತೆ ಮತ್ತದರ ಪ್ರದರ್ಶನ ಅಸಹ್ಯ ಹುಟ್ಟಿಸುವಂತೆ ಬೆಳೆಯುತ್ತಿದೆ. ಧರ್ಮ ತನ್ನ ನಿಜ ಅರ್ಥ ಕಳೆದುಕೊಂಡು ದಾಳವಾಗಿ ಬಳಕೆಯಾಗುತ್ತಿದೆ. ಅದು ಕೇವಲ ರಾಜಕೀಯ ಅಜೆಂಡಾ ಆಗಿ ಉಳಿದಿಲ್ಲ. ರಾಜಕೀಯ ಪಕ್ಷ-ಸಂಘಟನೆಗಳಿಗೆ ಸೀಮಿತಗೊಂಡಿಲ್ಲ. ಧಾರ್ಮಿಕ ಮೂಲಭೂತವಾದವು ಜನಸಾಮಾನ್ಯರ ಕಾಮನ್‌ಸೆನ್ಸ್ ಆಗಿ ಕತ್ತರಿಯಂತೆ ಸಮಾಜವನ್ನು ಸೀಳುತ್ತಿದೆ. ಸತ್ತ ಮೇಲೆ ಸಿಗುವ ಸ್ವರ್ಗದ ಆಸೆಯನ್ನೇ ಧಾರ್ಮಿಕತೆ ಎಂದು ಹೇಳುತ್ತ ಬದುಕಿರುವ ಭೂಮಿಯನ್ನು ನರಕವಾಗುವಂತೆ ಮಾಡುತ್ತಿದೆ. 








ಈ ಎರಡೂ ಅಪಾಯಕರವಾಗಿ ಬೆಳೆಯುತ್ತಲಿರುವಾಗ ಅವಕಾಶವಾದಿ ರಾಜಕಾರಣ ಅವುಗಳ ಜೊತೆ ಮೈತ್ರಿ ಸಾಧಿಸಿದೆ. ಧರ್ಮ-ರಾಜಕಾರಣ-ಬಂಡವಾಳ ಈ ಮೂರರ ಅಪವಿತ್ರ ಮೈತ್ರಿಯಿಂದ ಸಮುದಾಯಗಳು ಎದುರಿಸುತ್ತಿರುವ ಅಪಾಯಗಳು ಜನಸಾಮಾನ್ಯರ ಊಹೆಗೆ ನಿಲುಕದಂತಾಗಿದೆ. ದುರ್ಬಲರ ಅಭಿವ್ಯಕ್ತಿಯ ದಾರಿಗಳು ಮುಚ್ಚಿಕೊಳ್ಳುತ್ತಿವೆ. ನೊಂದವ ದನಿಯೆತ್ತದಂತೆ ಬಾಯಿಗೆ ಬೀಗ ಹಾಕುತ್ತಿವೆ. ಜನಸಮುದಾಯಗಳನ್ನು ಗಾಜಿನ ಗೋಳದಲ್ಲಿ ತುಂಬಿಟ್ಟು ಪೇಪರ್‌ವೈಟ್‌ಗಳಾಗಿಸಿ ಮೇಜಿನ ಮೇಲಿಡಲಾಗುತ್ತಿದೆ. ಅಷ್ಟೇ ಅಲ್ಲ, ಜನವಿರೋಧಿ ಜಾಲವು ಸಾಹಿತ್ಯ-ಸಂಸ್ಕೃತಿಯ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿವೆ. ಮೊದಲೆಲ್ಲ ಸುಳ್ಳು ಹೇಳಲು ಹೆದರಬೇಕಿತ್ತು, ಈಗ ಸತ್ಯ ಹೇಳಲು ಹೆದರಬೇಕಾದ ಕಾಲ ಬಂದಿದೆ. ಸತ್ಯ ನುಡಿಯುವವನಿಗೆ ಭದ್ರತೆ ಒದಗಿಸಿ ನಿಜವ ನುಡಿಸಬೇಕಿದೆ.

ಹೀಗೆ ಬಂಡವಾಳ ಹಾಗೂ ಮೂಲಭೂತವಾದ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹೊತ್ತಲ್ಲಿ ಸೂಕ್ಷ್ಮಜ್ಞನಾಗುಳಿದು ಬೆಂಕಿಯನ್ನು ಬೆಂಕಿಯೆಂದೂ, ಬೆಳಕನ್ನು ಬೆಳಕೆಂದೂ ಹೇಳಬೇಕಾದ; ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ? ಮೂಲಭೂತವಾದವನ್ನು ಅದರೆಲ್ಲ ಮುಖಗಳೊಂದಿಗೆ ಅನಾವರಣ ಮಾಡಬೇಕಾದ ಅಗತ್ಯವಿರುವ; ಬಂಡವಾಳದ ಹಿತಾಸಕ್ತಿಗಳನ್ನು ಗುರುತಿಸಿ ಜನಸಮುದಾಯವನ್ನು ಎಚ್ಚರಿಸಬೇಕಿರುವ; ಮಾರುವೇಷದವ ಮರ್ಮ ತಿಳಿಸಿಕೊಡಬೇಕಿರುವ ಕಾಲದಲ್ಲಿ ಅವರು ತಿಳಿದೋ ತಿಳಿಯದೆಯೋ ಅದೇ ವಿಷವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು, ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಅಷ್ಟೇ ಅಲ್ಲ, ಸದಾ ಚಲನಶೀಲ ಮನಸ್ಥಿತಿಯ, ಜೀವಪರವಾದ ಸಾಹಿತ್ಯವು ಎಡಬಿಡಂಗಿತನಕ್ಕೆ ಎರವಾಗಿ ಯುವ ಪೀಳಿಗೆಯ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.








ಸಾಹಿತ್ಯ-ಸಂಸ್ಕೃತಿಗಳ ಮೂಲಕ ಜನಸಾಮಾನ್ಯರನ್ನು ಆಳುವ, ಅಂಕೆಗೊಳಪಡಿಸುವ ರಾಜಕಾರಣದ ಹುನ್ನಾರವನ್ನು ಅನಾದಿಯಿಂದಲೂ ಕಾಣಬಹುದು. ಅರಸ, ದೇವರು ಮತ್ತು ದಾನಿ - ಈ ಮೂರರ ನೆರಳು ಕವಿತೆಯ ಮೇಲೆ ಬೀಳಬಾರದೆಂಬ ಮಾತಿದೆ. ಹಾಗೊಮ್ಮೆ ಅದರ ಹಂಗಿನಲ್ಲಿ ಬಿದ್ದರೆ ಎಂತೆಂಥ ಭಜನೆ, ಗುಣಗಾನ, ಭಟ್ಟಂಗಿತನದ ಸಾಹಿತ್ಯ ಹುಟ್ಟುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ತಲೆಮಾರುಗಳ ಸಾಕ್ಷಿಯಿದೆ. ಆದರೆ ಜನಸಾಹಿತ್ಯ ಎಂದಿಗೂ ಶರಣಾಗತಿಯ ದಾರಿ ಹಿಡಿಯಲಿಲ್ಲ. ಜಡಗೊಂಡ ವ್ಯವಸ್ಥೆಯನ್ನು, ತಾರತಮ್ಯ ತೋರಿಸುವ ದೇವರನ್ನು ಅದು ಪ್ರಶ್ನಿಸುತ್ತಲೇ ಬಂದಿದೆ. ಪಂಪ, ವಚನಕಾರರಿಂದ ಹಿಡಿದು ಜಾನಪದ ಸಂಸ್ಕೃತಿಯ ಮಹಾಕಾವ್ಯ, ನುಡಿಗಟ್ಟುಗಳವರೆಗೆ ನುಡಿಯು ಯಾವತ್ತೂ ಪ್ರಶ್ನಿಸುವ ಹಕ್ಕನ್ನು ಪ್ರತಿಪಾದಿಸುತ್ತಲೇ ಬಂದಿದೆ. 

ಆದರೆ ನಿಜವ ನುಡಿಯಬೇಕಿದ್ದ ಮನಸುಗಳು ಇವತ್ತು ಭ್ರಷ್ಟಗೊಂಡು ‘ಕುರ್ಚಿ ಹಿಡಿಯುವ ಕಲೆ’ಯಲ್ಲಿ ನಿಷ್ಣಾತರಾಗಿವೆ. ಜನಪರತೆಯ ಸೋಗಿನಲ್ಲಿ, ಅವನ ಕಷ್ಟ ಕಣ್ಣೀರಿನ ಮೇಲೆ ಪದ್ಯ ಬರೆದು, ನಾಟಕ-ಸಿನಿಮಾ ಮಾಡಿ ಪ್ರಶಸ್ತಿ-ಹಾರ-ತುರಾಯಿ ಪಡೆದು ಸಂಭ್ರಮಿಸುತ್ತಿವೆ. ಹೀಗಿರುವಾಗ ಸಾಹಿತಿಗೆ ಜನರ ನಡುವೆ ಸೂಜಿದಾರದ ಹಾಗೆ, ಎಚ್ಚರಿಸುವ ಕೈದೀವಿಗೆಗಳ ಹಾಗೆ ಕೆಲಸ ಮಾಡಬೇಕಾದ ತುರ್ತುನ್ನು ನೆನಪಿಸುವುದು ಅವಶ್ಯವಾಗಿದೆ.

ಎಂದೇ ಇವತ್ತು ಸಾಹಿತಿ ಮತ್ತು ಆಕ್ಟಿವಿಸ್ಟರ ಸಂಕರ ತಲೆಮಾರು ರೂಪುಗೊಳ್ಳಬೇಕಾದ ಅವಶ್ಯಕತೆ ಇದೆ. 

ತನ್ನ ಸಾಮಾಜಿಕ ಜವಾಬ್ದಾರಿ ಅರಿಯಲು ಸಾಹಿತಿಯೊಬ್ಬ ಆಕ್ಟಿವಿಸ್ಟ್ ಮನಸ್ಥಿತಿ ಹೊಂದುವುದು ಅನಿವಾರ್ಯವಾಗಿರುವಂತೆಯೇ, ಹೋರಾಟಗಾರರಿಗೆ ಕವಿ ಮನಸ್ಸು ಇರುವುದೂ ಅವಶ್ಯವಾಗಿದೆ. ಬದ್ಧತೆ, ನಿಷ್ಠೆ, ನಿಷ್ಠುರತೆ ಇವೆಲ್ಲ ಇದ್ದೂ ಕವಿ ಮನಸ್ಸು ಇಲ್ಲದ ಹೋರಾಟಗಾರ ಮೂಲಭೂತವಾದಿಯಾಗುವ, ಸರ್ವಾಧಿಕಾರಿಯಾಗುವ ಅಪಾಯವಿದೆ. ಅದಕ್ಕೆ ಪೋಲ್‌ಪಾಟ್, ಗಡ್ಡಾಫಿಯಂತಹ ಅಸಂಖ್ಯ ಉದಾಹರಣೆಗಳು ನಮ್ಮೆದುರಿಗಿವೆ. ಜೀವಕಾರುಣ್ಯ ಹುಟ್ಟಿಸುವ ಮಾನವೀಯತೆಯ ಸೆಲೆ ಮಾತ್ರ ಜೀವವಿರೋಧಿ ಆಗುವುದರಿಂದ ನಮ್ಮನ್ನು ಪಾರುಮಾಡಬಲ್ಲದು. ಆಗ ಬದುಕನ್ನು ಗಾಢವಾಗಿ ಪ್ರೀತಿಸುವಂತೆಯೇ ಜೀವಕೋಟಿಯನ್ನೂ ಪ್ರೀತಿಸಬಲ್ಲೆವು. ಇದರ ಮೊದಲ ಹೆಜ್ಜೆಯಾಗಿ ಕವಿ-ಹೋರಾಟಗಾರ ಇಬ್ಬರೂ ಒಂದೆಡೆ ಸೇರಿ, ಸಮಕಾಲೀನ ವಿದ್ಯಮಾನಗಳನ್ನು ಚರ್ಚಿಸುವ; ಸಮುದಾಯದೊಂದಿಗೆ ಕೊಡುಕೊಳುವಿರುವ ಚಿಂತನೆ ಹುಟ್ಟುವ ಅವಶ್ಯಕತೆ ಇದೆ. ಇಂಥ ಪರ್ಯಾಯ ಸಮ್ಮೇಳನಗಳು, ಸಮಾವೇಶಗಳು ಅದೇ ಉದ್ದೇಶದಿಂದ ಜನ್ಮ ತಾಳುತ್ತವೆ. 

ಕೇವಲ ಮೂರು ದಶಕಗಳ ಕೆಳಗೆ ಸಾಹಿತ್ಯ ಶೋಷಿತ, ಜನಸಾಮಾನ್ಯನಿಂದ ದೂರ ಹೋಗುತ್ತಿದೆ ಎಂಬ ಅನುಮಾನ ಹುಟ್ಟಿದಾಗ ೧೯೭೯ರಲ್ಲಿ ಬಂಡಾಯ ಸಂಘಟನೆ ಹುಟ್ಟಿಕೊಂಡಿದ್ದನ್ನು ನಾವಿಲ್ಲಿ ನೆನೆಯಬಹುದು. ನಂತರವೂ ಹಲವು ಬಾರಿ ಪರ್ಯಾಯ ದಾರಿಗಳ ಹುಡುಕಾಟ ನಡೆಯುತ್ತಲೇ ಇದೆ. ಅವು ಸಾಹಿತ್ಯ ವಲಯವನ್ನು ಒಡೆದವು ಎಂಬ ಆರೋಪವೂ ಇದೆ. 

ಇದೇ ವೇಳೆ ಕೆಲ ಅನುಮಾನಗಳನ್ನು ನಮ್ಮಲ್ಲಿ ನಾವು ಪರಿಹರಿಸಿಕೊಳ್ಳುವ ಅವಶ್ಯಕತೆ ಇದೆ.









ಇದು ನುಡಿಸಿರಿಗೆ ಪರ್ಯಾಯ ಎಂಬ ಮಾತು ಮತ್ತೆಮತ್ತೆ ಕೇಳಿಬರುತ್ತಿದೆ. ಆದರೆ ಇದು ಕೇವಲ ನುಡಿಸಿರಿಗಲ್ಲ, ಧರ್ಮ-ಬಂಡವಾಳ-ರಾಜಕಾರಣದ ಜೊತೆಜೊತೆ ಸಾಹಿತ್ಯವನ್ನೂ ಬೆರೆಸಿ; ಅದ್ದೂರಿಯನ್ನೇ ಮೇಲ್ಪಂಕ್ತಿಯಾಗಿಸುತ್ತಿರುವ ಅಂಥ ಇನ್ಯಾವುದೇ ಮಾದರಿಗೆ ಪರ್ಯಾಯವಾಗಿ ಒಂದು ಮಾದರಿ ಸೃಷ್ಟಿಸಬೇಕಾದ ಅನಿವಾರ್ಯತೆಯಿಂದ ಹುಟ್ಟಿದೆ. ಇದು ಮನರಂಜನೆಗಾಗಿ ಸಾಹಿತ್ಯ ಎಂಬ ನಂಬಿಕೆಯಿಂದ ಹುಟ್ಟಿರುವುದಲ್ಲ, ನೋಯುವವನಿಗಾಗಿ ಸಾಹಿತ್ಯ ಎಂಬ ಅರಿವಿನಿಂದ ಹುಟ್ಟಿದೆ. ಅದ್ದೂರಿ ಕಾಣಿಕೆ, ಅನ್ನ ಸಂತರ್ಪಣೆ ನಮ್ಮ ಗುರಿಯಲ್ಲ, ಜನರ ನಡುವೆ ತೆರಳಲು ಸಿದ್ಧವಿರುವ ಮನಸ್ಸುಗಳು ಒಂದೆಡೆ ಕಲೆತು ವಸ್ತುಸ್ಥಿತಿಯನ್ನು, ಪರಸ್ಪರರನ್ನು ಅರಿಯಲು; ಸಹಕರಿಸಿ ಮುಂದಡಿಯಿಡಲು ಒಂದು ವೇದಿಕೆಯಾಗಿದೆ. ಟಿಎಡಿಎ, ಪಾಸ್, ಒಒಡಿ ಪಡೆದವರು; ಭಾಗವಹಿಸಲೇಬೇಕೆಂಬ ಕಡ್ಡಾಯದ ವಿದ್ಯಾರ್ಥಿಗಳು ಇಲ್ಲಿಲ್ಲ. ಸ್ವಯಂಪ್ರೇರಣೆಯಿಂದ ಬಂದ ಸಮಾನ ಆಸಕ್ತರನ್ನು ಒಂದೆಡೆ ಕಲೆ ಹಾಕುವುದು ನಮ್ಮ ಉದ್ದೇಶವಾಗಿದೆ.
ಇದು ಅಕ್ಷರಲೋಕವನ್ನು ಒಡೆಯುವ ಪ್ರಯತ್ನವಲ್ಲ. ಬದಲಿಗೆ ಎಚ್ಚರಿಸುವ ಪ್ರಯತ್ನ. ಆರೋಗ್ಯಕರ ಮನಸುಗಳ ಒಂದು ಐಕ್ಯ ಪರ್ಯಾಯದ ಹುಡುಕಾಟ. ಎಲ್ಲರಿಗೂ ಒಂದು ಮಹತ್ವಾಕಾಂಕ್ಷೆ ಇರುತ್ತದೆ - ತಾನು ಏನನ್ನೋ ಬದಲಿಸಬಲ್ಲೆ, ಪರಿವರ್ತಿಸಬಲ್ಲೆ ಎಂದು. ಆದರೆ ಎಲ್ಲವೂ ಅಷ್ಟು ಸುಲಭದಲ್ಲಿ ಬದಲಾಗಲಾರದು. ನರಭಕ್ಷಕ ಹುಲಿಯ ಹಿಂಡಿನಲ್ಲಿ ನಿಂತು ಅಹಿಂಸೆಯ ಬಗ್ಗೆ ಪಾಠ ಹೇಳಿದರೆ ಅದು ನಾವು ಬೆನ್ನು ಹಾಕುವುದನ್ನೇ ಕಾಯುವುದೇ ಹೊರತು ತಾನು ಅಹಿಂಸೆ ಕಲಿಯುವುದಿಲ್ಲ. ಹಾಗೇ ನಮ್ಮ ಎಲ್ಲ ಸೂಕ್ಷ್ಮ ಮಾತುಗಳೂ ಆಡಬಹುದಾದ ವೇದಿಕೆಯಲ್ಲಷ್ಟೇ ಆಡಿದರೆ ಬೆಲೆಯಿದೆ, ನಮ್ಮ ಇರುವಿಕೆಯನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಕಡೆ ಕಾಲೂರದಂತೆ ಎಚ್ಚರ ವಹಿಸುವುದು ಈ ಕಾಲದ ಅಗತ್ಯವಾಗಿದೆ. 
ನಮ್ಮ ಹಲವು ಸಹಭಾಗಿಗಳಿಗೆ ಕೇವಲ ಪ್ರತಿಕ್ರಿಯಾತ್ಮಕ ಕ್ರಿಯೆಗಳಲ್ಲಿ ತೊಡಗಿದ್ದೇವೆಯೇ ಎಂಬ ಗೊಂದಲವಿದೆ. ಆದರೆ ಹಾಗಿಲ್ಲ ಸ್ನೇಹಿತರೇ, ರಚನಾತ್ಮಕವಾಗಿಯೂ ಅಲ್ಲಿಲ್ಲಿ ಹಲವು ಗುಂಪುಗಳಲ್ಲಿ ನಾವು ಕ್ರಿಯಾಶೀಲರಾಗಿದ್ದೇವೆ. ಕರ್ನಾಟಕ ಜನಸಾಹಿತ್ಯ ಸಂಘಟನೆ, ನಾವು ನಮ್ಮಲ್ಲಿ, ಬಯಲು ಬಳಗ, ಕಾವ್ಯಮಂಡಲ, ಕಾವ್ಯಬೋಧಿ, ಕೆಕೆಎಸ್ವಿ, ಸಹಯಾನ, ವರ್ತಮಾನ ಬಳಗ, ಲಡಾಯಿ ಬಳಗ - ಇಂಥ ಹಲವು ಗುಂಪುಗಳು ಸಕ್ರಿಯವಾಗಿ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿವೆ. ಆ ಸಣ್ಣ ಗುಂಪುಗಳೂ ಕೆಲವೊಮ್ಮೆ ಪ್ರತಿಕ್ರಿಯಾತ್ಮಕ ಕಾರ್ಯದಲ್ಲಿಯೂ ತೊಡಗಿಕೊಳ್ಳಬೇಕಾದ ತುರ್ತು ಒದಗುತ್ತದೆ. ಏಕೆಂದರೆ ತಕ್ಷಣದ ಪ್ರತಿಕ್ರಿಯಾತ್ಮಕ ಚಟುವಟಿಕೆಗಳು ಜನರ ನಡುವೆ, ಅಕ್ಷರ ವ್ಯವಸಾಯಿಗಳ ನಡುವೆ ಒಂದು ಸೂಕ್ಷ್ಮಜ್ಞತೆ ಬೆಳೆಸಿ ಚಿಂತಿಸಲು ಹಚ್ಚುತ್ತವೆ. ವೇಷಗಾರರ ಮುಖವಾಡ ಕಳಚಿಹಾಕುತ್ತದೆ. ಎಂದೇ ಸೂಕ್ತ ಸಮಯದಲ್ಲಿ ಸೂಕ್ತ ಪ್ರತಿಕ್ರಿಯಾತ್ಮಕ ಚಟುವಟಿಕೆ ನಡೆಸುವುದೂ, ಅದರಾಚೆ ಅದು ವಿಸ್ತರಿಸಿಕೊಳ್ಳುವುದೂ ಕಟ್ಟುವ ಕೆಲಸದ ಒಂದು ಭಾಗವಾಗಿಯೇ ಇದೆ. ನಾವೆಲ್ಲ ಪುಟ್ಟ ಇರುವೆ ಒಂದೊಂದೇ ಮಣ್ಣಕಣ ಹೊತ್ತು ಗೂಡು ಕಟ್ಟುವಂತೆ ಕಟ್ಟುವ ಕೆಲಸಕ್ಕಾಗಿಯೇ ಒಟ್ಟಾಗಿ ಸೇರಿದ್ದೇವೆ.
ಸೂಕ್ಷ್ಮಜ್ಞರಾದರೂ ಕೆಲವೊಮ್ಮೆ ಸಣ್ಣ ಋಣಭಾರಗಳಿಗೆ ಜೋತುಬಿದ್ದಿರುತ್ತೇವೆ; ಕೆಲವು ಸಂಬಂಧದಿಂದ ಬಂದ ಋಣಭಾರವಾದರೆ ಮತ್ತೆ ಕೆಲವು ಆರ್ಥಿಕ ಋಣಭಾರಗಳು. ಆದರೆ ಋಣಭಾರ ನಮ್ಮ ಆತ್ಮಸಾಕ್ಷಿಯನ್ನು, ನ್ಯಾಯ ಸೂಕ್ಷ್ಮತೆಯನ್ನು ನಾಶ ಮಾಡದಂತಿರಬೇಕು. ಶರಣಾಗತಗೊಳಿಸದಂತಿರಬೇಕು. ಕೊರಗ ಸಮುದಾಯದ ಸಂಘಟನೆಯ ಮಾಜಿ ಅಧ್ಯಕ್ಷೆ ಸುಶೀಲಾ ಹೇಳಿದ ಮಾತನ್ನು ನಾನಿಲ್ಲಿ ನೆನೆಯಬಯಸುತ್ತೇನೆ: ‘ನಾವು ಸಮುದಾಯದ ಒಳಗಾಗಲೀ, ಹೊರಗಾಗಲೀ ಸಂಪ್ರದಾಯದ ಹೆಸರಿನ ಅನ್ಯಾಯವನ್ನು ವಿರೋಧಿಸುವವರು. ನಮಗೆ ಯಾರೋ ಸಹಾಯ ಮಾಡಿರಬಹುದು, ಹಾಗೆಂದು ಅದೇ ವ್ಯಕ್ತಿ ಮಲದ ಗುಂಡಿಗಿಳಿಸಿ ಅವಮಾನ ಮಾಡಿದರೆ ಸುಮ್ಮನಿರಲು ಸಾಧ್ಯವೇ? ಶಿಕ್ಷಣಕ್ಕೆ ಸಹಾಯ ಮಾಡಿದರೆಂದು ಸಮುದಾಯಕ್ಕೆ ಅವಮಾನವಾಗುವಂತೆ ನಡೆದುಕೊಂಡರೆ ಸುಮ್ಮನಿರಲು ಸಾಧ್ಯವೆ? ನ್ಯಾಯ ಕೇಳುವವರು ಎಲ್ಲೇ ಅನ್ಯಾಯ ಜರುಗಿದರೂ ಪ್ರತಿಭಟಿಸಬೇಕು.’ ಇಂಥ ನ್ಯಾಯಸೂಕ್ಷ್ಮದ ಮಾತುಗಳು ನಮ್ಮವೂ ಆಗಬೇಕು. ಗುರುವಾಗಿಯೋ, ಮತ್ತಿನ್ಯಾವುದೋ ಕಾರಣಕ್ಕೋ ಕೆಲ ಸಂಬಂಧಗಳು ಏರ್ಪಟ್ಟಿರುತ್ತವೆ. ಎಲ್ಲ ಗೌರವವನ್ನಿಟ್ಟುಕೊಂಡೇ ತಪ್ಪು ಕಂಡಾಗ ಅದು ತಪ್ಪು ಎನ್ನುವ ನಿಗಿನಿಗಿ ಕೆಂಡದಂತಹ ಆತ್ಮಸಾಕ್ಷಿಯನ್ನು ಕೈಲಿ ಹಿಡಿದು ನಿಲ್ಲಬೇಕು. ಯಾವ್ಯಾವುದೋ ಋಣಭಾರಕ್ಕೆ ಜೋತುಬಿದ್ದು ಆಡಬೇಕಾದ ಮಾತು ಆಡದೇ ತಲೆಮಾರುಗಟ್ಟಲೇ ದಾಸ್ಯದಲ್ಲಿ ಕಳೆದೆವು. ಸಣ್ಣ ಋಣಭಾರಗಳಿಗೆ ನಾವು ಜೋತುಬೀಳಬೇಕೋ ಅಥವಾ ಈ ನೆಲದ, ಜನದ ಋಣಕ್ಕೆ ಜೋತುಬೀಳಬೇಕೋ? ಅಧಿಕಾರ-ಬಲವಿರುವವರ ಋಣಕ್ಕೆ ಬಾಯಿ ಕಟ್ಟಿಕೊಳ್ಳಬೇಕೋ ಅಥವಾ ದುರ್ಬಲರ ಪ್ರತಿನಿಧಿಯಾಗಿರುವುದಕ್ಕೆ ಧ್ವನಿ ಎತ್ತಬೇಕೋ? ಈ ಪ್ರಶ್ನೆಯನ್ನು ಆವಾಗೀವಾಗ ಕೇಳಿಕೊಳ್ಳುತ್ತ ಇದ್ದರೆ ಒಂದು ನ್ಯಾಯಸೂಕ್ಮ್ಷತೆ ತಂತಾನೇ ಒದಗುತ್ತದೆ.







ಮುಗಿಸುವ ಮುನ್ನ:

ಅರ್ಥಪೂರ್ಣವಾಗಿ, ಒಳಗೊಳ್ಳುವಿಕೆಯ ಕ್ರಿಯೆಯಾಗಿ, ಅವಶ್ಯವಿರುವಾಗಲೆಲ್ಲ ಅನ್ಯಾಯದ ವಿರುದ್ಧ ಒಂದು ದನಿಯಾಗಿ ನಾವೆಲ್ಲ ಮತ್ತೆಮತ್ತೆ ಸೇರೋಣ; ಭಿನ್ನಮತಗಳನ್ನಿಟ್ಟುಕೊಂಡೇ ತಾತ್ವಿಕವಾಗಿ ಅಗತ್ಯವಿರುವಾಗ ಜೊತೆ ಸಾಗೋಣ. 

ನಿರಾಕರಣೆಗೆ ತುಂಬ ಧೈರ್ಯ ಬೇಕು. ಆತ್ಮ ಶುದ್ಧಿಯೂ ಬೇಕು. ಜೊತೆಗೆ ಏಕೆ ನಿರಾಕರಿಸುತ್ತಿರುವೆನೆಂಬ ಸ್ಪಷ್ಟತೆ ಬೇಕು. ಅದು ಬರಲೆಂದೇ ಈ ಕೆಳಗಿನ ಮಾತುಗಳನ್ನು ಎಲ್ಲರೆದುರು ಆಡಿಕೊಳ್ಳಬಯಸುತ್ತೇನೆ:

ಕೋಮುವಾದಿ ವ್ಯಕ್ತಿ/ಸಂಘಟನೆ/ಸರ್ಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ; 

ಅಂಥವರು ಕೊಟ್ಟ ಪ್ರಶಸ್ತಿ ಸ್ವೀಕರಿಸುವುದಿಲ್ಲ. 

ಯಾವುದೇ ಸರ್ಕಾರಿ/ಖಾಸಗಿ ಪ್ರಶಸ್ತಿ/ಸಂಭಾವನೆ ಹಣವನ್ನು ಸ್ವಂತಕ್ಕೆಂದು ಬಳಸುವುದಿಲ್ಲ.



- ಡಾ. ಎಚ್. ಎಸ್. ಅನುಪಮಾ

Tuesday, 17 December 2013

ಜನನುಡಿ ಸಮಾವೇಶದ ಎರಡನೆಯ ದಿನದ ಫೋಟೋ ಗ್ಯಾಲರಿ.... ಜನನುಡಿ 2































































































































ಅಭಿಮತ ಮಂಗಳೂರು ಸಂಘಟಿಸಿದ 'ಜನನುಡಿ' ಸಮಾವೇಶದ ಎರಡನೆಯ ದಿನದ  ಕಾರ್ಯಕ್ರಮಗಳಲ್ಲಿ ವಿಚಾರ ಮಂಡಿಸದ ವಿಚಾರವಂತರ ವಿವಿಧ ಭಾವಭಂಗಿಗಳು ಮತ್ತು ನೆರೆದ ವಿಚಾರಾಸಕ್ತರ ವಿಭಿನ್ನ ನೋಟಗಳ ಛಾಯಾಚಿತ್ರಗಳು  ಆಸಕ್ತರಿಗಾಗಿ.


ಇಲ್ಲನ ಫೋಟೋಗಳನ್ನು  ಡೌನ್ ಲೋಡ್ ಮಾಡಿಕೊಂಡು ಬಳಸುವಾಗ ದಯವಿಟ್ಟು  ಫೋಟೋಗಳನ್ನು ತೆಗೆದ ಶ್ರೀ ಐವನ್ ಡಿಸಿಲ್ವ ರವರ ಹೆಸನ್ನು  ಪ್ರಕಟಿಸಲು ಕೋರಿಕೆ....