Monday 16 December 2013

ಜನನುಡಿ ಸಮಾವೇಶದ ಉದ್ಘಾಟನಾ ಸಮಾರಂಭದ ಛಾಯಾಚಿತ್ರಗಳು ಮತ್ತು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಡಾ! ಅನುಪಮಾ ಸಂದರ್ಶನ

ಮೂಲಭೂತವಾದ, ಬಂಡವಾಳವಾದ ಎರಡೂ ಸಾಹಿತ್ಯ ಸಂಸ್ಕೃತಿಗಳ ಮುಖವಾಡ ತೊಟ್ಟುಕೊಂಡಿವೆ: ಡಾ.ಅನುಪಮಾ



ಸಂದರ್ಶನ: ರೇಣುಕೇಶ್ ಬಿ , ಶಿವಮೊಗ್ಗ

ಸೌಜನ್ಯ : ವಾರ್ತಾಭಾರತಿ/ಲಡಾಯಿ ಪ್ರಕಾಶನಬಸು. 


 ವಾರ್ತಾಭಾರತಿ: ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಹೇಗೆ ಸಹಕಾರಿ?

ಡಾ.ಅನುಪಮಾ: ಯಾವುದೇ ಭಾಷೆ ಬಳಸಿದರೆ ಬೆಳೆಯುತ್ತದೆ, ಬಳಸುವ ಜನಸಮುದಾಯ ಉಳಿದರೆ ಉಳಿಯುತ್ತದೆ. ಈ ಸರಳ ತಾತ್ವಿಕತೆಯ ಪ್ರತಿರೂಪ ವಾಗಿ ಭಾಷೆ ಬಳಸುವ ಜನ ಸಮುದಾಯ ಹಾಗೂ ಸಾಹಿತಿಗಳು ಪರಸ್ಪರ ಮುಖಾಮುಖಿಯಾಗುವ, ಬರೆಯುವವರು ಸಮಾಜದ ಇತರ ವರ್ಗಗ ಳೊಂದಿಗೆ ಮುಕ್ತ ಸಂವಾದದಲ್ಲಿ ತೊಡಗುವ ಇವೆಂಟ್ ಆಗಿ ಸಮ್ಮೇಳನಗಳನ್ನು ನೋಡಬಹುದು. 



 ವಾರ್ತಾಭಾರತಿ: ತಾವು ಆಯೋಜಿಸುತ್ತಿರುವ ಜನ ನುಡಿ ಸಮ್ಮೇಳನದ ಮಹತ್ವದ ಬಗ್ಗೆ ವಿವರಿಸಿ? ಈ ರೀತಿಯ ಸಮಾವೇಶ ಆಯೋಜಿಸಬೇಕೆಂಬ ಚಿಂತನೆ ನಿಮ್ಮಲ್ಲಿ ಬಂದಿದ್ದೇಕೆ?


ಡಾ.ಅನುಪಮಾ: ಕಳೆದ ಕೆಲವು ವರುಷಗಳಿಂದ ಸಾಹಿತ್ಯ-ಸಂಸ್ಕೃತಿ ಕುರಿತ ಸಮಾವೇಶಗಳು ಥಳುಕಿನ ಪ್ರದರ್ಶನವಾಗುತ್ತ ಸಾಗಿರುವುದನ್ನು ನೋಡ ಬಹುದು. ನುಡಿಸಿರಿ, ಸಾಹಿತ್ಯ ಸಂಭ್ರಮ, ಕನ್ನಡ ಹಬ್ಬ, ಸಾಹಿತ್ಯ ಉತ್ಸವ ಹೀಗೆ ಹೆಸರೇ ಅವುಗಳ ಸ್ವರೂಪದಲ್ಲಾದ ಬದಲಾವಣೆಯನ್ನು ಸೂಚಿಸುತ್ತಿದೆ. ಅಂಥ ಕೆಲ ಅದ್ದೂರಿ ಸಮ್ಮೇಳನಗಳು, ದೀಪೋತ್ಸವ ಸಾಹಿತ್ಯ ಸಮಾವೇಶಗಳು ದಕ್ಷಿಣ ಕನ್ನಡದಲ್ಲಿಯೂ ನಡೆಯುತ್ತ ಬಂದವು. ಆದರೆ ವರ್ಷದಿಂದ ವರ್ಷಕ್ಕೆ ಅವು ಹೆಚ್ಚೆಚ್ಚು ಅದ್ದೂರಿಗೊಳ್ಳುತ್ತ ಹೋದದ್ದಷ್ಟೇ ಅಲ್ಲ, ಕೇವಲ ಹಣವಿದ್ದರೆ ಸಾಹಿತಿಗಳನ್ನು, ಚಳುವಳಿಗಾರ ರನ್ನು ಒಟ್ಟುಗೂಡಿಸಬಹುದೆಂಬ ಅಭಿಪ್ರಾಯ ಮೂಡಿಸತೊಡಗಿದವು. ಅದರ ಸಂಘಟಕರ ಬಲ ಪಂಥೀಯ ನಂಟಷ್ಟೇ ದಿಗಿಲು ಹುಟ್ಟಿಸಲಿಲ್ಲ, ನಮ್ಮ ಜೀವಪರ ಸಂಗಾತಿಗಳೂ ತಿಳಿದೋ, ತಿಳಿಯದೆಯೋ ತಮ್ಮ ತಾತ್ವಿಕತೆಗೆ ಪೂರ್ಣ ವಿರುದ್ಧ ಇರುವ ಸಮ್ಮೇಳನದಲ್ಲಿ ಪಾಲ್ಗೊಳ್ಳತೊಡಗಿದ್ದು ಕಳವಳ ಉಂಟುಮಾಡಿತು. ಕೋಮು ವಾದವನ್ನು ವಿರೋದಿಸುವ, ಸಮಾನತೆಯ ಕನಸುಳ್ಳ ಕನಸು ಗಾರರೂ ಸಹಿತ ವಿಸ್ಮತಿಗೊಳಗಾದವರಂತೆ, ತಾವಾಡಿ ಬರೆದ ಮಾತುಗಳನ್ನೇ ಮರೆತವರಂತೆ ಬಂದು ಹೋಗಿದ್ದನ್ನು ಗಮನಿಸಿದ್ದೆವು. ಧಾರ್ಮಿಕ ಮೂಲಭೂತವಾದವನ್ನು ಅದರ ಸಾಂಸ್ಕೃತಿಕ ಮುಖ ವಾಡವನ್ನು ಕಿತ್ತೆಸೆದು ಅರ್ಥ ಮಾಡಿಕೊಳ್ಳದಿದ್ದರೆ ಸಹಬಾಳ್ವೆ ಕುರಿತ ನಮ್ಮ ಬರವಣಿಗೆ, ಹೋರಾಟಕ್ಕೆ ಯಾವ ಅರ್ಥವೂ ಇಲ್ಲ. ಮಠದ ಸ್ವಾಮಿಗಳು, ಧರ್ಮಾಧ್ಯಕ್ಷರು, ವಿಎಚ್‌ಪಿ ಮುಖ್ಯಸ್ಥರು, ರಾಜ ಕಾರಣಿಗಳು ಇರುವ ಸ್ವಾಗತ ಸಮಿತಿಯ ಸಮ್ಮೇಳನದಲ್ಲಿ ಯಾವುದೇ ಜೀವಪರ ಕತೆ-ಕವಿತೆ-ಭಾಷಣ ಸ್ವೀಕೃತವಾಗುವುದಿಲ್ಲ. ತಮ್ಮ ಬಲ ಪ್ರದರ್ಶನಕ್ಕೆ, ಬಂಡವಾಳಕ್ಕೊಂದು ಮೌಲ್ಯ ಗಿಟ್ಟಿಸಿಕೊಳ್ಳಲಿಕ್ಕೆ ನಡೆಸುವ ಸಮ್ಮೇಳನಗಳಲ್ಲಿ ಸೂಕ್ಷ್ಮ ಮನದ ಸಂಗಾತಿಗಳು ಭಾಗವಹಿಸುವುದರಿಂದ ಅವರ ಸಂವೇದನೆಗೆ ಯಾವುದೇ ಉಪಯೋಗವಿಲ್ಲ. ಅವರ ಭಾಗವಹಿಸುವಿಕೆಯಿಂದ ಸಂಘಟಕರಿಗೆ ಬೇರೆ ರೀತಿಯ ಲಾಭವುಂಟಾಗಬಹುದಷ್ಟೆ.






ವಾರ್ತಾಭಾರತಿ: ಬೆಂಕಿಯು ಬೆಂಕಿಯೆಂದೂ, ಬೆಳಕು ಬೆಳಕೆಂದೂ ತಿಳಿಹೇಳ ಬೇಕಾದವರಿಗೆ ಇದೆಲ್ಲ ಯಾಕೆ ಹೊಳೆಯುತ್ತಿಲ್ಲ? ಅಥವಾ ಗೊತ್ತಿದ್ದೂ ಸುಮ್ಮನಿದ್ದಾರೆಯೇ?

ಡಾ.ಅನುಪಮಾ:
 ಇಂಥ ಉರಿವ ಪ್ರಶ್ನೆಗಳನ್ನು ಮನದಲ್ಲಿ ತುಂಬಿಕೊಂಡ ನಾವು ಕೆಲವರು ಧಾರವಾಡದಲ್ಲಿ ಜನಸಾಹಿತ್ಯ ಸಮಾವೇಶ ಆಯೋಜಿಸಿದ್ದ ಸ್ವರೂಪದಲ್ಲಿ ಮಂಗಳೂರಿನಲ್ಲೂ ಒಂದು ಸಂಘಟಿತ ಪ್ರಯತ್ನ ಆಗಲೆಂದು ಬಯಸಿದೆವು. ಉತ್ಸಾಹಿ ಪತ್ರಕರ್ತ-ಸಾಹಿತಿ- ಆಕ್ಟಿವಿಸ್ಟ್ ಗುಂಪಿನ ಜೊತೆ ಚರ್ಚಿಸಿದೆವು. ಸಾರಾ ಅಬೂಬಕರ್, ಜೀವನ್ ರಾಜ್, ಶಶಿಧರ ಹೆಮ್ಮಾಡಿ, ಸಂವರ್ತ, ಸಬಿಹಾ ಭೂಮಿಗೌಡ, ಮುನೀರ್ ಕಾಟಿಪಳ್ಳ, ತೇಜ ಸಚಿನ್, ಆಯಿಶಾ, ಸುದೀಪ್ತೊ ಮತ್ತಿತರರ ಜೊತೆ ಅಭಿಪ್ರಾಯ ವಿನಿಮ ಯವಾಗಿ ‘ಅಭಿಮತ’ ರೂಪುಗೊಂಡಿತು. ಕಳೆದ ಬಾರಿ ನುಡಿಸಿರಿಯ ಕುರಿತು ಎಷ್ಟೋ ಪ್ರಶ್ನೆಗಳನ್ನೆತ್ತಿ ನವೀನ್ ಸೂರಿಂಜೆ ಬರೆದಿದ್ದರು, ನಾನೂ ಬರೆದಿದ್ದೆ. ಅದಕ್ಕೆ ವಿವೇಕ್ ರೈ ಸಹಮತ ವ್ಯಕ್ತಪಡಿಸಿ ನಿಮ್ಮ ಜೊತೆ ಇದ್ದೇನೆಂದು ಹೇಳಿದ್ದವರು ಈ ಬಾರಿ ಅವರೇ ವಿಶ್ವ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಆಯ್ಕೆಯಾ ದರು! ನಾವು ಯಾರನ್ನು, ಯಾವುದನ್ನು ಮಾದರಿ ಎಂದುಕೊಳ್ಳುತ್ತೇವೋ ಅವು ರೂಪುಗೊಳ್ಳುವುದರಲ್ಲಿ ಪುತಪುತನೆ ಉದುರಿ ಬೀಳುವಾಗ ಆದ ನೋವಿನಿಂದ ‘ಅಭಿಮತ’ ಹುಟ್ಟಿತು, ‘ಜನನುಡಿ’ ಹುಟ್ಟಿತು. 

ವಾರ್ತಾಭಾರತಿ: ಜನ ನುಡಿಯ ಮುಖ್ಯ ಉದ್ದೇಶವೇನು? ಈ ಸಮ್ಮೇಳನ ನಿರಂತರವಾಗಿ ನಡೆಯಲಿದೆಯೇ? 

ಡಾ.ಅನುಪಮಾ:   ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತ ಲಿವೆ. ಜನಸಾಮಾನ್ಯರ ದೈನಂದಿನ ಬದುಕಿ ನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿವೆ. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷ ಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ- ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿ ಕೊಳ್ಳದೇ ಅದರ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದವರು ಮಹಾ ಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯ ದಿಕ್ಕು ತಪ್ಪಿಸುವ, ಗೊಂದಲ ಗೊಳಿಸುವ ಅಪಾಯ ದಟ್ಟವಾಗಿದೆ. ಎಡಬಿಡಂಗಿ ತನದ ಅಪಾಯಗಳ ಕುರಿತು, ಮೂಲಭೂತವಾದದ ಮುಖಗಳ ಕುರಿತು ನಮ್ಮ ಸಹಚರಿಗಳನ್ನು ಹಾಗೂ ಸಮುದಾಯವನ್ನು ಎಚ್ಚರಿಸುತ್ತ ಪರ್ಯಾಯ ಮಾದರಿಯನ್ನು ರೂಪಿಸುವುದು ಜನ ನುಡಿಯ ಉದ್ದೇಶ. ಒಂದು ಚಾರಿತ್ರಿಕ ಅನಿವಾರ್ಯತೆಯಾಗಿ, ವರ್ತಮಾನದ ಟ್ರೆಂಡ್‌ಗಳಿಗೆ ಪ್ರತಿಕ್ರಿಯಾತ್ಮಕವಾಗಿ ಜನನುಡಿ ರೂಪುಗೊಂಡಿತು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವಷ್ಟು ದಿನ ಅದು ಪ್ರತಿವರ್ಷ ನಡೆಯುತ್ತದೆ. ಅದು ಇನ್ನಷ್ಟು ಬಲಗೊಳ್ಳಬೇಕು, ಸಾಮುದಾಯಿಕ ಕ್ರಿಯೆಯಾಗಿ, ಮರೆತ ಸಂಸ್ಕೃತಿಗಳನ್ನು ಪುನರೆಚ್ಚರಿಸುವ ಸಮಾವೇಶ ವಾಗಿ ಹೊಮ್ಮಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. 

ವಾರ್ತಾಭಾರತಿ: ಜನ ನುಡಿಯು ಆಳ್ವಾಸ್ ನುಡಿಸಿರಿಗೆ ಪರ್ಯಾಯ ಎಂಬ ಮಾತು ಕೇಳಿಬರುತ್ತಿದೆ. ಇದು ಸತ್ಯವೇ?

ಡಾ.ಅನುಪಮಾ:
ನಾವು ಮೋಹನ ಆಳ್ವ ವಿರುದ್ಧ ಇಲ್ಲ. ನುಡಿಸಿರಿಗೆ ವಿರುದ್ಧವೂ ಇಲ್ಲ. ಆದರೆ ಅವರು ವ್ಯಕ್ತಿಯಾಗಿ ಮತ್ತು ಸಂಘಟಕರಾಗಿ ರೂಪಿಸಹೊರಟ ಮಾದರಿ ಏನಿದೆಯಲ್ಲ, ಅದನ್ನು ವಿರೋಧಿಸುತ್ತೇವೆ. ಇದು ನುಡಿಸಿರಿಗಷ್ಟೇ ಪರ್ಯಾಯ ಅಲ್ಲ; ಧರ್ಮ- ಬಂಡವಾಳ-ರಾಜಕಾರಣದ ಜೊತೆ ಸಾಹಿತ್ಯವನ್ನೂ ಬೆರೆಸಿ; ಅದ್ದೂರಿಯನ್ನೇ ಮೇಲ್ಪಂಕ್ತಿಯಾಗಿಸುತ್ತಿರುವ ಎಲ್ಲಕ್ಕೂ ಪರ್ಯಾಯವೇ. ಅಂಥ ಒಂದು ಮಾದರಿ ಸೃಷ್ಟಿಸಬೇಕಾದ ಅನಿವಾರ್ಯತೆಯಿಂದ ಇದು ಹುಟ್ಟಿದೆ. ಇದು ಮನರಂಜನೆಗಾಗಿ ಸಾಹಿತ್ಯ ಎಂಬ ನಂಬಿಕೆಯಿಂದ ಹುಟ್ಟಿರುವುದಲ್ಲ; ನೊಂದವರಿಗಾಗಿ, ನೋಯುವವರಿಗಾಗಿ ಸಾಹಿತ್ಯ ಎಂಬ ಅರಿವಿನಿಂದ ಹುಟ್ಟಿದೆ.




ವಾರ್ತಾಭಾರತಿ: ಆಳ್ವಾಸ್ ನುಡಿಸಿರಿಗೂ, ಜನ ನುಡಿಗೂ ಇರುವ ವ್ಯತ್ಯಾಸವೇನು?

ಡಾ.ಅನುಪಮಾ: 
ನುಡಿಸಿರಿ, ಜನನುಡಿ ಈ ಎರಡೂ ಕಾರ್ಯಕ್ರಮಗಳ ಸಂಘಟನೆಯ ಉದ್ದೇಶ, ಅದರ ಹಿಂದಿರುವ ವ್ಯಕ್ತಿಗಳು, ತಾತ್ವಿಕತೆ ಎಲ್ಲ ಸಂಪೂರ್ಣ ಬೇರೆಯೇ ಆಗಿರುವುದರಿಂದ ವ್ಯತ್ಯಾಸ- ಸಾಮ್ಯತೆಯ ಪ್ರಶ್ನೆಯೇ ಬರುವುದಿಲ್ಲ. ಆದರೂ ನೀವು ಕೇಳುತ್ತಿರುವ ಕಾರಣಕ್ಕೆ ಹೇಳಬೇಕೆಂದರೆ: ಅದ್ದೂರಿ ಕಾಣಿಕೆ, ಅನ್ನಸಂತರ್ಪಣೆ ನಮ್ಮ ಗುರಿಯಲ್ಲ. ಇಲ್ಲಿ ಬ್ರಾಹ್ಮಣ, ಜೈನ, ಜಿಎಸ್‌ಬಿ ಸಮುದಾಯಕ್ಕೆ ಬೇರೆ ಬೇರೆ ಭೂರಿ ಭೋಜನವಿಲ್ಲ. ಎಲ್ಲ ಒಂದೆಡೆ ಕಲೆತು, ನಾಕು ತುತ್ತು ತಿಂದೆದ್ದು ತುರ್ತಾಗಿ ಚರ್ಚಿಸಲೇ ಬೇಕಾದ ವಿಚಾರಗಳ ಕುರಿತು ಸಂವಾದ ನಡೆಸುತ್ತೇವೆ. ಅದಕ್ಕಾಗಿ ಯಾರಿಗೂ ಟಿಎಡಿಎ ಕೊಡುತ್ತಿಲ್ಲ. ವಿವಿಧ ಪ್ರಕಾಶನ ಸಂಸ್ಥೆಗಳಿಂದ ದೇಣಿಗೆಯಾಗಿ ಸಂಗ್ರಹಿಸಿದ ಉತ್ತಮ ವಿಚಾರಗಳ ಪುಸ್ತಕಗಳನ್ನು ಭಾಗವಹಿಸಿದವರಿಗೆ ಕಾಣಿಕೆಯಾಗಿ ಕೊಡುತ್ತೇವೆ. ಪಾಸ್, ಒಒಡಿ ಪಡೆದವರು; ಕಡ್ಡಾಯ ಭಾಗವಹಿಸಲೇಬೇಕೆಂಬ ಆಜ್ಞೆ ಹೊತ್ತ ವಿದ್ಯಾರ್ಥಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿ ಸೇರುವುದಿಲ್ಲ. ನಮ್ಮಲ್ಲಿ ಸ್ವಾಗತ ಸಮಿತಿಯಿಲ್ಲ. ಅದರಲ್ಲಿ ಯಾವುದೇ ರಾಜಕಾರಣಿ- ಧರ್ಮಾಧಿಕಾರಿ-ಸ್ವಾಮಿ ಗಳಿಲ್ಲ. ಕಣ್ಣು ಕೋರೈಸುವ ಮನರಂಜನಾ ಕಾರ್ಯ ಕ್ರಮವಿರುವುದಿಲ್ಲ. ಕೋಟ್ಯಂತರ ಖರ್ಚು ವೆಚ್ಚವಿಲ್ಲ. ಸರಕಾರದಿಂದ, ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ ಪಡೆದಿಲ್ಲ. ಸಮಾನಮನಸ್ಕರು ಹಾಗೂ ಆಸಕ್ತರು ಕೊಟ್ಟ ಹಣದಿಂದ ಇದು ನಡೆಯುತ್ತಿದೆ. ಮುಗಿದ ಮೇಲೆ ಖರ್ಚುವೆಚ್ಚ ಕುರಿತ ವರದಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ನೀಡಲಿದ್ದೇವೆ. 

ವಾರ್ತಾಭಾರತಿ: ಪ್ರಸ್ತುತ ಸಾಮಾಜಿಕ ತಲ್ಲಣಗಳಿಗೆ ಜನನುಡಿ ಸಮಾವೇಶ ಯಾವ ರೀತಿಯಲ್ಲಿ ಧ್ವನಿಯಾಗಲಿದೆ?

ಡಾ.ಅನುಪಮಾ:
 ಎರಡು ದಿನಗಳ ಮಿತಿಯಲ್ಲಿ ಸಾಧ್ಯವಾದಷ್ಟು ಚರ್ಚೆಯಾಗಲಿ ಎಂಬ ಬಯಕೆಯಿದೆ. ಕರಾವಳಿಯ ತಲ್ಲಣಗಳು, ಕೋಮುವಾದ, ಮಾರುಕಟ್ಟೆ, ಜನಸಂಸ್ಕೃತಿ, ಮಹಿಳಾಲೋಕದ ಸವಾಲುಗಳು, ಮಾನವಹಕ್ಕು ಉಲ್ಲಂಘನೆ, ತಳ ಸಮುದಾಯಗಳ ತಲ್ಲಣಗಳು, ಸಾಹಿತ್ಯಲೋಕದ ಬದಲಾವಣೆಗಳು ಇಂಥ ಎಲ್ಲ ಸಮಕಾಲೀನ ಸಾಮಾಜಿಕ ಪರಿಸ್ಥಿತಿಯನ್ನು ಚರ್ಚೆಗೊಳಪಡಿಸಿ ಸವಾಲು-ಸಾಧ್ಯತೆಗಳನ್ನು ಪ್ರಸ್ತುತಗೊಳಿಸಿ, ಮುಕ್ತಸಂವಾದಕ್ಕೆ ತೆರೆದುಕೊಳ್ಳುವ ಮೂಲಕ ಅದು ಜನಧ್ವನಿಯಾಗ ಬಯಸುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಇದುವರೆಗೆ ನಡೆದಿದ್ದು ಸರಿಯೇ? ಅಲ್ಲವಾದರೆ ಏನು ಮಾಡಬೇಕು? ಎಂಬ ಪ್ರಶ್ನೆಯ ಬೀಜ ಬಿತ್ತುವ ಮೂಲಕ ಆಂತರಿಕ ಬದಲಾವಣೆಯತ್ತ ಮೊದಲ ಹೆಜ್ಜೆಯಿಡುವ ಆಶಯವಿದೆ. ಮುರಿಯುತ್ತಲೇ ಹೊಸದನ್ನು ಕಟ್ಟುವತ್ತ ನಮ್ಮ ಗಮನವಿದೆ. ಇದೊಂದೇ ಅವಕಾಶವಲ್ಲ, ಇದೇ ಕೊನೆಯ ಅವಕಾಶವೂ ಅಲ್ಲ. ನಮ್ಮೊಡನಿರುವ ಮನಸುಗಳು ಇಂಥ ಎಲ್ಲ ವಿಷಯ ಕುರಿತು ಕೇವಲ ಈ ಸಮಾವೇಶಕ್ಕಷ್ಟೇ ಅಲ್ಲ, ಮುಂದೆಯೂ ಒಟ್ಟಾಗಿ ಕೆಲಸ ಮಾಡಲಿವೆ, ಇದೇ ನಮ್ಮ ಆಶಯವಾಗಿದೆ.

ವಾರ್ತಾಭಾರತಿ: ಪ್ರಸ್ತುತ ಕನ್ನಡಭಾಷೆ, ಸಾಹಿತ್ಯದ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು ಆಯೋಜಿಸುತ್ತಿರುವ ಕೆಲ ಸಮ್ಮೇಳನಗಳು ಗುಪ್ತ ವಾಣಿಜ್ಯೀಕರಣದ ಹಿನ್ನೆಲೆ, ಕೋಟ್ಯಂತರ ರೂ. ವ್ಯವಹಾರ ಹೊಂದಿವೆ ಎಂಬ ಆರೋಪದ ಕುರಿತಂತೆ ತಮ್ಮ ಅಭಿಪ್ರಾಯವೇನು?

ಡಾ.ಅನುಪಮಾ:  
ಸಾಹಿತ್ಯ-ಸಂಸ್ಕೃತಿಯ ಮುಖ ವಾಡ ತೊಟ್ಟು ಜನಪರ ಕಾಳಜಿ ವ್ಯಕ್ತಪಡಿಸುವವರು ಕೋಟ್ಯಂತರ ರೂಪಾಯಿಗಳನ್ನು ತಮ್ಮ ಇವೆಂಟ್ ಗಳಿಗೆ ಖರ್ಚು ಮಾಡುತ್ತಾರೆ. ಲಕ್ಷಾಂತರ ರೂಪಾಯಿ ಜಾಹಿರಾತು ನೀಡುತ್ತಾರೆ. ಅದಕ್ಕಾಗಿ ಕಾರ್ಪೊರೇಟ್ ಮತ್ತು ಧಾರ್ಮಿಕ ಸಂಸ್ಥೆಗಳಿಂದ ಧನಸಹಾಯ ಪಡೆಯುತ್ತಾರೆ. ಅಂಥ ಸಮ್ಮೇಳನ ವಿವಾದಿತ ಧರ್ಮಾಧಿಕಾರಿಯನ್ನು ಉದ್ಘಾಟಕರಾಗಿ ತೆಗೆದು ಕೊಳ್ಳುತ್ತಿದೆ. ಎಸ್‌ಇಝಡ್‌ಗಾಗಿ ಭೂಮಿ ನುಂಗುವ ವರಿಂದ ಕೃಷಿಮೇಳವನ್ನು ಏರ್ಪಡಿಸುತ್ತಿದೆ. ಕೋಮು ಗಲಭೆಗಳಲ್ಲಿ ಹರಿದ ಜನರ ರಕ್ತ ನೇತ್ರಾವತಿಯಲ್ಲಿ ಲೀನವಾಗುವಂತೆ ಮಾಡಿದವರನ್ನು ಸ್ವಾಗತ ಸಮಿತಿ ಯಲ್ಲಿಟ್ಟುಕೊಳ್ಳುತ್ತಿದೆ. ಉದ್ರೇಕಕಾರಿ ಭಾಷಣ ಮಾಡುತ್ತ, ಅನ್ಯಕೋಮುಗಳ ಬಗೆಗೆ ಅಸಹನೆ ಹುಟ್ಟಿಸುವವರಿಂದ ಯುವಜನತೆ ಮತ್ತು ಸಮಾಜ ಎಂಬ ಭಾಷಣ ಮಾಡಿಸುತ್ತದೆ. ಅಂಥಲ್ಲಿ ಸೆಕ್ಯುಲರ್ ಸಾಹಿತಿಗಳೂ, ಚಳುವಳಿಗಾರರೂ ಪ್ರಶಸ್ತಿ ಸ್ವೀಕರಿಸಲು ಬಾಜಾಭಜಂತ್ರಿಗಳಿರುವ ಅದ್ದೂರಿ ಏರ್ಪಾಟು ಮಾಡುತ್ತಿದೆ. ಇವೆಲ್ಲವನ್ನು ಬಂಡವಾಳವು ತನ್ನ ಹಿತಾ ಸಕ್ತಿಗೆ ಮಾಡಿಕೊಳ್ಳುವ ರಾಜಿಯ ಭಾಗವಾಗಿಯೇ ನೋಡಬೇಕು. ಅವರ ಎಲ್ಲ ಕ್ರಿಯೆಗಳ ಹಿಂದೆಯೂ ಬಂಡವಾಳದ ಕೈವಾಡವಿರುತ್ತದೆ. ಬಂಡವಾಳಕ್ಕೆ ಜನ ಎಂದರೆ ಗಾಜಿನ ಗೋಳದಲ್ಲಿ ತುಂಬಿಡಬೇಕಾದ ಸರಕೂ ಹೌದು, ಗ್ರಾಹಕರೂ ಹೌದು, ಕಾರ್ಮಿಕನೂ ಹೌದು. ಬಂಡವಾಳದ ಬಹುರೂಪವನ್ನು ತಿಳಿಸ ಬೇಕಾದ ಸಾಹಿತಿ ಜನರನ್ನು ಪೇಪರ್‌ವೈಟ್‌ಗಳಾಗಿಸಿ ತನ್ನ ಕತೆ ಕವಿತೆಯ ಹಾಳೆ ಹಾರದಂತೆ ಇಟ್ಟುಕೊಳ್ಳಲು ಬಳಸಬಾರದು. ಅವನ ಸಂವೇದನೆಯನ್ನು ಕೋಟ್ಯಂತರ ರೂಪಾಯಿ ವೆಚ್ಚದ ಸಮ್ಮೇಳನಗಳು ಮಬ್ಬುಗೊಳಿಸಿ ಭ್ರಷ್ಟಗೊಳಿಸಿದರೆ ಅದನ್ನು ಎಚ್ಚರಿಸಲೇ ಬೇಕಾಗುತ್ತದೆ. 

ವಾರ್ತಾಭಾರತಿ: ನುಡಿಯ ಹೆಸರಿನಲ್ಲಿ ಸಿರಿ ಪ್ರದರ್ಶನಕ್ಕೆ ಮುಂದಾಗಿರುವವರ ಬಗ್ಗೆ ತಮ್ಮ ಸಲಹೆಯೇನು?

ಡಾ.ಅನುಪಮಾ:
 ನುಡಿಯು ಸಿರಿಯಲ್ಲ, ಬದುಕು...

ವಾರ್ತಾಭಾರತಿ: ಜನನುಡಿ ಸಮಾವೇಶದ ಮೂಲಕ ಎಡಪಂಥೀಯ ವಿಚಾರ ಧಾರೆಗಳ ಸಂಘಟನೆಗಳಿಗೆ, ವ್ಯಕ್ತಿಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದಿರೆಂಬ ಮಾತಿದೆ. ನಿಜವೇ?

ಡಾ.ಅನುಪಮಾ:
 ದಕ್ಷಿಣಕನ್ನಡಕ್ಕೆ ಎಡಪಂಥೀಯ ವಿಚಾರಧಾರೆ ಹೊಸದಲ್ಲ. ಜನನುಡಿ ಅದಕ್ಕೆ ವೇದಿಕೆಯಾಗಬೇಕಾದ ಅನಿವಾ ರ್ಯತೆಯಿಲ್ಲ. ಅಷ್ಟಕ್ಕೂ ಎಡ ಪಂಥೀಯ ವಿಚಾರಧಾರೆ ಬಹಿಷ್ಕೃತ ಅಲ್ಲ. ಅದು ಶೋಷಿತ ಪರ ಸಿದ್ಧಾಂತವೇ ಆಗಿದೆ. ಸಮಾ ನತೆ ಸಮಾಜ ಕಟ್ಟುವ ಕನಸನ್ನಿಟ್ಟು ಕೊಂಡು ಕೆಲಸ ಮಾಡುತ್ತಿದೆ. ನಾನು ಜೀವ ಪರ. ಅಂಬೇಡ್ಕರ್ ಮತ್ತು ಮಾರ್ಕ್ಸ್ ಮೊದಲ ಗುರುಗಳು. ಅವರ ಜೊತೆ ಜೊತೆಗೆ ಗಾಂಧಿ-ಲೋಹಿಯಾ ಎಂಬ ಒಳ್ಳೆಯ ಮಕ್ಕಳನ್ನೂ ಹೊತ್ತೊ ಯ್ಯಲು ಸಾಧ್ಯವೇ ಎಂದು ಪ್ರಯತ್ನಿಸುತ್ತಿರುವವಳು. ಇದನ್ನು ನೀವು ಯಾವ ಪಂಥವೆಂದಾದರೂ ಕರೆಯಿರಿ. ಇಷ್ಟು ಮಾತ್ರ ಹೇಳಬಹುದು: ಜನ ನುಡಿ ಬಲಪಂಥೀಯ ವಿಚಾರ ಧಾರೆಯನ್ನು ಹೊರತು ಪಡಿಸಿ ಮತ್ತೆಲ್ಲ ಮಾನವಪರ ಮನಸುಗಳನ್ನು ಒಟ್ಟು ತರಲು ಬಯಸುತ್ತಿದೆ.

ವಾರ್ತಾಭಾರತಿ: ಇತರೆ ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಕೆ ಮಾಡಿದರೆ ಜನನುಡಿ ಸಮಾವೇಶ ಯಾವ ರೀತಿಯಲ್ಲಿ ಭಿನ್ನ?

 ಡಾ: ಅನುಪಮಾ:
 ಇತರರ ಕಡೆ ನೋಡುವುದು ಒಂದು ಬಗೆಯಾದರೆ ನಮ್ಮ ಸಂಘಟನೆಯನ್ನು ಎಲ್ಲ ನೋಟಗಳಿಂದ ಗಟ್ಟಿಗೊಳಿಸುವ ಕಡೆ ಗಮನಹರಿಸುವುದು ಇನ್ನೊಂದು ಬಗೆ. ನಮ್ಮ ಘೋಷವಾಕ್ಯವಾದ ‘ನುಡಿಯು ಸಿರಿಯಲ್ಲ, ಬದುಕು’ ಎನ್ನುವುದರಲ್ಲಿ ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ ತಾತ್ವಿಕತೆ ಅಂತರ್ಗತವಾಗಿದೆ. ಕಲೆ ಸಮಾಜಕ್ಕಾಗಿಯೇ ಇದೆ ಎಂಬ ಅರಿವು ನಮ್ಮದಾಗಿದೆ. ಇದು ಜನ ನುಡಿಯ ತಳಪಾಯ. ಕಟ್ಟಡ ಕಟ್ಟುವ ಕಡೆಗಷ್ಟೇ ನಮ್ಮ ಗಮನ. 

ವಾರ್ತಾಭಾರತಿ: ಯುವ ಮಹಿಳಾ ಸಾಹಿತಿಗಳಿಗೆ ನಿಮ್ಮ ಸಲಹೆಯೇನು?

ಡಾ.ಅನುಪಮಾ:  
ಪೇಶೆಂಟುಗಳನ್ನು ನೋಡುವ ವೃತ್ತಿ ನನಗೆ ಕಲಿಸಿರುವುದನ್ನೇ ಅವರೊಡನೆಯೂ ಹಂಚಿಕೊಳ್ಳಬಯಸುತ್ತೇನೆ: ಆರೋಗ್ಯ ಯಾವು ದೆಂದು ತಿಳಿಯಿರಿ. ಕಾಯಿಲೆ ಏನೆಂದು ಸರಿಯಾಗಿ ಗುರುತಿಸಿ ಸೂಕ್ತ ನಿವಾರಣೋಪಾಯ, ಚುಚ್ಚುಮದ್ದು ಪಡೆಯಿರಿ.

ವಾರ್ತಾಭಾರತಿ: ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿರುವ ನಾ.ಡಿಸೋಜಾ ಕುರಿತಂತೆ ಹೇಳಿ...

ಡಾ.ಅನುಪಮಾ:
 ನಾನು ಶಿವಮೊಗ್ಗ ಜಿಲ್ಲೆಯವಳಾಗಿ ಉತ್ತರ ಕನ್ನಡದಲ್ಲಿ ನೆಲೆಸಿರುವವಳು. ನಾ.ಡಿಸೋಜಾ ಉತ್ತರ ಕನ್ನಡದ ಮುರ್ಡೇಶ್ವರದ ವರಾಗಿ ಶಿವಮೊಗ್ಗ ಜಿಲ್ಲೆಯಲ್ಲಿರುವವರು. ಮೆಲುಮಾತಿನ, ಸೂಕ್ಷ್ಮತಂತುಗಳುಳ್ಳ ಅವರ ಬರವಣಿಗೆಯ ಬಗೆಗೆ ನನಗೆ ಗೌರವವಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಆ ಹಿರಿಯರಿಗಿಂತ ಉತ್ತಮ ಆಯ್ಕೆ ಯಾವುದೂ ಇರಲಿಲ್ಲ. ಅವರ ಕಾರಣವಾಗಿಯೇ ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬಯಸಿದ್ದೆ. ಆದರೆ ಅದೇ ನಾ. ಡಿಸೋಜಾ ನುಡಿಸಿರಿಯಲ್ಲೂ ಇದ್ದಾರೆ! ಸಂವೇದನೆ ಜನಪರವೇ ಆಗಿದ್ದರೂ ವೈಯಕ್ತಿಕವಾಗಿ ಯಾವ ವೇದಿಕೆಯನ್ನಾದರೂ ಹಂಚಿಕೊಂಡುಬಿಡುವ ಡಿಸೋಜಾರ ಮುಗ್ಧತೆಯೋ ಮತ್ತಿನ್ನೆಂಥದೋ ಒಂದು ನನ್ನಂಥವರನ್ನು ಗೊಂದಲಗೊಳಿಸುತ್ತಿದೆ. ನಾವು ಗೌರವಿಸುವ ಹಳೆತಲೆಮಾರಿನ ಹಲವರಲ್ಲಿ ಈ ದ್ವಂದ್ವ ಕಾಣಬಹುದು. ಇದು ಯುವಪೀಳಿಗೆಗೆ ಯಾವ ಮೇಲ್ಪಂಕ್ತಿ ಹಾಕಿಕೊಡುತ್ತಿದೆ ಎಂದು ಆತಂಕ ವಾಗುತ್ತಿದೆ.




ವಾರ್ತಾಭಾರತಿ: ಕಸಾಪ ಸಾಹಿತ್ಯ ಸಮ್ಮೇಳನ ಗಳನ್ನು ಮತ್ತಷ್ಟು ಅರ್ಥಗರ್ಭಿತವನ್ನಾಗಿಸುವಲ್ಲಿ ನಿಮ್ಮ ಸಲಹೆಯೇನು?

ಡಾ.ಅನುಪಮಾ:
 ಕನ್ನಡ ಸಾಹಿತ್ಯ ಪರಿಷತ್ತು ಸರಕಾರಿ ಅನುದಾನವನ್ನವಲಂಬಿಸಿದ ಒಂದು ಸಂಸ್ಥೆ. ಪ್ರತಿ ವರ್ಷ ನಡೆಯುವ ಸಮ್ಮೇಳನವೂ ಅದರ ಪ್ರತಿ ಬಿಂಬವೇ ಆಗಿರುತ್ತದೆ. ಅದು ಎಷ್ಟು ರಾಜಕೀಕರಣ ಗೊಂಡಿದೆಯೆಂದರೆ ಅಲ್ಲಿ ಸಾಹಿತಿಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಅಷ್ಟೇ ಅಲ್ಲ, ಅದು ಕನ್ನಡದ ಪ್ರಾತಿನಿದಿಕ ಸಂಸ್ಥೆ ಎನ್ನುವಂತೆಯೂ ಇಲ್ಲ. ಸರಕಾ ರದ ಹಂಗಿನಲ್ಲಿರುವ ಕಸಾಪದಲ್ಲಿ ರಾಜಕೀಯ- ಸಾಮಾಜಿಕ ಬದುಕಿನ ಲೆಕ್ಕಾಚಾರ, ಸಮೀಕರಣಗಳೇ ಮುಂದುವರೆಯುತ್ತಿವೆ. ಸಾಹಿತ್ಯ ಚಳುವಳಿಯ ಲ್ಲಾಗುವ ಹೊಸತನಗಳಿಗೆ ತೆರೆದುಕೊಳ್ಳದೇ, ಕಾಲದ ಪಲ್ಲಟಗಳನ್ನು ಗಮನಿಸದೆ ಬೀಸುಗಾಲಿಡುವ ಕಸಾಪ ಉದ್ದಕ್ಕೂ ಸಾಂಪ್ರದಾಯಿಕ ನೆಲೆಯಲ್ಲಿ ಒಂದೇ ಮಾದರಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಕಾಲದ ಸಂಕಟಗಳಿಗೆ, ಅದನ್ನು ಒಳ ಗೊಳ್ಳುವ ಸಾಹಿತ್ಯ ಸಂವೇದನೆಯ ಕಡೆಗೆ ಗಮನ ಕೊಡದೆ ವರ್ಷವರ್ಷ ಸಮ್ಮೇಳನ ನಡೆದು ಗೊತ್ತುವಳಿ ಸ್ವೀಕರಿಸಲಾಗುತ್ತಿದೆೆ. ಪರಿಷತ್ತು ಜಾತಿವಾಸನೆಯಿಂದ ಎಂದೂ ಬಿಡಿಸಿಕೊಳ್ಳದಿರುವುದು; ರಾಜಕಾರಣಿ ಗಳಿಂದ ಉದ್ಘಾಟಿಸಲ್ಪಡುವುದು; ಸಾಹಿತ್ಯಕ್ಕೆ ಸಂಬಂ ಧವೇ ಇಲ್ಲದ ಸ್ವಾಮಿಗಳನ್ನು ಕರೆತಂದು ಉಧೋ ಉಧೋ ಎನ್ನುವುದು ಇವೆಲ್ಲ ಅದರ ಸ್ವರೂಪಕ್ಕೆ ತಕ್ಕ ಪುರಾವೆಗಳಾಗಿವೆ. ಒಂದು ವೇಳೆ ಕಸಾಪ ಹೊಸತನ ಪಡೆದುಕೊಳ್ಳಬಯಸಿದಲ್ಲಿ ತುಂಬ ನಿಷ್ಠುರ ದಾರಿ ಕ್ರಮಿಸಬೇಕಾಗುತ್ತದೆ. ಸ್ವಾಯತ್ತ ಸಂಸ್ಥೆಯಾಗಿ ತನ್ನ ಹಣಕಾಸನ್ನು ತಾನೇ ಉತ್ಪಾದಿಸಿಕೊಂಡು ಸರಕಾರದ ಹಂಗಿನಿಂದ ಹೊರಬರಬೇಕು. ವರ್ತಮಾನದ ತಲ್ಲಣಗಳ ಬಗ್ಗೆ ಮಾತನಾಡಿ ಜನರ ಧ್ವನಿಯಾಗ ಬೇಕು. ಸಾಹಿತ್ಯದ ಬೆಳವಣಿಗೆ ಗಮನಿಸಿ ಹೊಸ ಸಾಧ್ಯತೆಗಳಿಗೆ ಅವಕಾಶ ನೀಡಬೇಕು. ಮೆರವ ಣಿಗೆಯು ರಾಜಕಾರಣದ ಮತ್ತು ಆಳುವವರ ಭಾಷೆ. ಮೆರವಣಿಗೆಯ ಔಚಿತ್ಯ ವಿವೇಚನೆಗೊಳ ಪಟ್ಟು ಸರಳತೆ ಸಾಹಿತ್ಯ ಸಮ್ಮೇಳನಗಳ ಆದ್ಯತೆ ಯಾಗಬೇಕು. ಸಾಹಿತ್ಯ ಅರಿವಿನ ವಿನಯದತ್ತ ಸಾಗಬೇಕು. ಕಸಾಪ ಮುನ್ನಡೆಸುವವರು ಈ ಎಲ್ಲದರ ಕುರಿತು ತುರ್ತಾಗಿ ಯೋಚಿಸಬೇಕು.  




ವಾರ್ತಾಭಾರತಿ: ಮಹಿಳಾ ಪರ ಹೋರಾಟಗಾರರಿಗೆ, ಸಂಘಟನೆಗಳಿಗೆ ನಿಮ್ಮ ಕಿವಿಮಾತೇನು?

 ಡಾ.ಅನುಪಮಾ:
 ಕಿವಿಮಾತು ಹೇಳುವಷ್ಟು ಅರ್ಹಳಲ್ಲ. ಎಷ್ಟೋ ವರ್ಷಗಳಿಂದ ಹೋರಾಟದ ಲ್ಲಿರುವ ದು. ಸರಸ್ವತಿ, ಇಂದಿರಾ ಕೃಷ್ಣಪ್ಪ, ಕೆ. ನೀಲಾ, ಬಾನು ಮುಷ್ತಾಕ್, ಮೀನಾಕ್ಷಿ ಬಾಳಿ, ಎನ್. ಗಾಯತ್ರಿ, ಷರೀಫಾ, ಅನಸೂಯಮ್ಮ, ಹೇಮಾ, ಗೌರಿ ಲಂಕೇಶ್, ಡಾ. ರತಿರಾವ್ ಅವರಂಥ ಎಷ್ಟೋ ಸಂಗಾತಿಗಳಿಂದ ಒಂದೊಂದು ನುಡಿ ಕಲಿಯುತ್ತಿದ್ದೇನೆ. ಇತ್ತೀಚೆಗೆ ಗುಲಾಬಿ ಗ್ಯಾಂಗ್‌ನ ಸಂಪತ್‌ಪಾಲ್ ದೇವಿಯ ಚಿಂತನೆ ತಿಳಿದು ಮೂಕವಿಸ್ಮಿತಳಾಗಿದ್ದೇನೆ. ಜನಚಳುವಳಿಯಲ್ಲಿ ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತೆಯರು ನನ್ನ ಜೀವನೋತ್ಸವ ವನ್ನು ಹೆಚ್ಚು ಮಾಡಿದ್ದಾರೆ. ಒಟ್ಟಾರೆ ನನಗನಿಸು ವುದಿಷ್ಟು: ಹಲವು ಪಂಥ, ಸಿದ್ಧಾಂತ, ಸಂಘಟನೆಗಳಲ್ಲಿ ಕ್ರಿಯಾಶೀಲ ಮಹಿಳೆಯರು ಹಂಚಿಹೋಗಿದ್ದರೂ ಜೈವಿಕವಾಗಿ ಮಹಿಳೆ ಎಂಬ ಕಾರಣಕ್ಕೆ ಎಲ್ಲರೂ ಒಂದೇ ಚಳುವಳಿಯ ಭಾಗವಾಗಿ ಒಗ್ಗೂಡಬೇಕು. ಇದೇ ಮಂಗಳೂರಿನಲ್ಲಿ ಕಳೆದ ವರ್ಷ ಐದಾರು ಸಾವಿರ ಮಹಿಳೆಯರು ಒಟ್ಟಾಗಿ ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದೆವು. ತಮ್ಮತಮ್ಮ ಸಂಘಟನೆಗಳ ಹಿತಾಸಕ್ತಿಯ ಜೊತೆಗೆ ಒಟ್ಟು ಮಹಿಳಾ ಚಳುವಳಿಯೊಂದು ಹುಟ್ಟಿ ಬೆಳೆಯಲು ಎಲ್ಲರೂ ಭೇದ ಮರೆತು ಒಗ್ಗಟ್ಟಾಗಬೇಕು; ಅದರಲ್ಲೂ ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರು ಚಳುವಳಿಯ ಮುನ್ನೆಲೆಗೆ ಬಂದು ಅದಕ್ಕೊಂದು ತಾತ್ವಿಕ ಗಟ್ಟಿತನ ಒದಗುವಂತೆ ಆಗಬೇಕು ಇದು ಕಿವಿಮಾತಲ್ಲ, ನನ್ನ ಕನಸು.



No comments:

Post a Comment